ಶ್ರೀ ದೇವಿ ತ್ರಿಕಣ್ಣೇಶ್ವರೀ ಅಮ್ಮನವರು
ದಾರುಪಿಠ ಪ್ರತಿಷ್ಠಾಪನೆ 14-04-2014
ಪ್ರತಿಷ್ಠಾಪನೆ ಮಾಡಿದವರು ಶಿಬರೂರು ಶ್ರೀ ವಾಸುದೇವ ಆಚಾರ್ಯರು
ಶ್ರೀ ದೇವಿ ತ್ರಿಕಣ್ಣೇಶ್ವರೀ ಅಮ್ಮನವರ ದೇವಸ್ಥಾನದ ಸ್ಥಳ ಪುರಾಣ
ಸದಾಶಿವ ಶೆಟ್ಟಿ, ಶ್ರೀ ದೇವಿಯ ಅರ್ಚಕರು, ಕೋಳದ ಮನೆ ಮೂಳೂರು:-ಅಮ್ಮನವರ ದೇವಸ್ಥಾನ ನಿರ್ಮಿಸಲು ಕಾರಣವಾದ ವಿಚಾರಗಳನ್ನು ಈ ಮೂಲಕ ತಮ್ಮಲ್ಲರ ಗಮನಕ್ಕೆ ತರಲು ಇಚ್ಛಿಸುತ್ತೇನೆ. 2003-04ರಲ್ಲಿ ನಾನು ಮೂಳೂರು ಗ್ರಾಮದ ಸಪರಿವಾರ ಉಲ್ಲಾಯ ಕೊಡಮಂತಾಯ ಬೊಬ್ಬರ್ಯ ಕ್ಷೇತ್ರಕ್ಕೆ ಸಂಬಂಧಿಸಿ ಏನೋ ಒಂದು ರೀತಿಯ ಒತ್ತಡ ಅನುಭವಿಸುತ್ತಿದ್ದೆ. ನಾನೇನೋ ಮಾಡಬೇಕಾಗಿದೆ ಎನ್ನುವ ಒತ್ತಡ. ಏನು ಮಾಡಬೇಕೆಂದು ತಿಳಿಯದ ಕಾರಣ ನಾನು ಈ ಒತ್ತಡದಲ್ಲಿ ಸುಮಾರು ಐದಾರು ತಿಂಗಳು ಒದ್ದಾಡಿದ್ದೇನೆ. ಕೊನೆಗೊಂದು ದಿನ ಈ ಬಗ್ಗೆ ತಿಬರಿನ ಕೊಡಮಣಿತ್ತಾಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಈ ಬಗ್ಗೆ ಮಾತಾಡುವುದೆಂದು ಸಂಕಲ್ಪ ಮಾಡಿಕೊಂಡು ಮನದಲ್ಲೇ ಪ್ರಾರ್ಥಿಸಿಕೊಂಡೆ. ಅದರ ನಂತರ ಈ ಒತ್ತಡದ ತೀವ್ರತೆ ಕಡಿಮೆಯಾಗಿತ್ತು. 2004ರಲ್ಲಿ ಒಂದು ದಿನ ಅದೇ ಮೊದಲ ಬಾರಿಗೆ ನನ್ನ ತಮ್ಮ ಪ್ರಕಾಶನೊಂದಿಗೆ (ವನಜ ಚಿಕ್ಕಿಯ ಮಗ) ತಿಬರಿನ ಕೊಡಮಣಿತ್ತಾಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಆಗ ಗುತ್ತಿನಾರ್ ಆಗಿದ್ದ ಶ್ರೀ ಪ್ರಭಾಕರ ಶೆಟ್ಟಿಯವರಲ್ಲಿ ಈ ಬಗ್ಗೆ ಮಾತಾಡಿದೆ. ಇದಕ್ಕೆ ಪರಿಹಾರ ಸೂಚಿಸುವಂತೆ ಕೋರಿದೆ. ಇಂತಹ ವಿಚಾರಗಳಿಗೆ ನಾನು ಪರಿಹಾರ ಹೇಳಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ನೀಡಬೇಕಾದವರು ಶ್ರೀಮಧುರಾಯ ಭಟ್ರಂತವರು ಮತ್ತು ಶ್ರೀ ದೇವಿದಾಸ ಶರ್ಮರಂತವರು ಎಂದು ತಿಳಿಸಿ ನೀನು ಅವರಿಬ್ಬರಲ್ಲಿ ಯಾರದಾದರೂ ಬಳಿ ಹೋಗು ಎಂದರು. ನೀವೇ ಸೂಚಿಸಿ ನಾನು ಯಾರ ಬಳಿಗೆ ಹೋಗಬೇಕು ಎಂದು ಕೇಳೀದಾಗ ಅವರು ಶ್ರೀ ದೇವಿದಾಸ ಶರ್ಮರಲ್ಲಿಗೆ ಹೋಗು ಎಂದು ತಿಳಿಸಿದರು. ಕ್ಷೇತ್ರದ ದೈವಿಶಕ್ತಿಗಳಿಗೆ ಕೈ ಮುಗಿದು ಅಲ್ಲಿಂದ ಕಟೀಲು ಮಾರ್ಗವಾಗಿ ಅತ್ತೂರಿನಲ್ಲಿದ್ದ ಶ್ರೀ ದೇವಿದಾಸ ಶರ್ಮರಲ್ಲಿ ಹೊರಟೆವು. ದಾರಿಯ ಮಧ್ಯೆ ಕಟೀಲು ದೇವಸ್ಥಾನಕ್ಕೆ ಹೋಗಿ ದೇವಿಗೆ ಪ್ರಾರ್ಥಿಸಿ ಅಲ್ಲಿಂದ ನೇರವಾಗಿ ಶ್ರೀ ದೇವಿದಾಸ ಶರ್ಮರಲ್ಲಿಗೆ ಹೋಗಲಾಯ್ತು. ಬಂದ ವಿಚಾರ ಶರ್ಮರಲ್ಲಿ ತಿಳಿಸಲಾಯ್ತು.
ಎಷ್ಟು ಬಾರಿ ಪ್ರಶ್ನೆ ಇಟ್ಟರೂ ನಿನಗೆ ಮೂಳೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏನೂ ಕೆಲಸ ಇಲ್ಲ ಅದು ಈಗಾಗಲೇ ಜೀರ್ಣೋದ್ಧಾರವಾಗಿದೆ. ಯಾಕೆ ಈ ರೀತಿಯ ಒತ್ತಡ ಇದೆ ಎಂದು ತಿಳಿದು ಬರುತ್ತಿಲ್ಲ ಎಂದರು. ನನ್ನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದು ಭಾವಿಸಿ ಅಲ್ಲಿಂದ ಹೊರಡಲು ಅನುವಾದೆ. ಹೊರಡುವ ಮೊದಲು ಶ್ರೀಶರ್ಮರಲ್ಲಿ ಕೇಳಿದೆ. ಕೆಲವು ದಿನಗಳ ಹಿಂದೆ ನಮ್ಮ ಬನದಲ್ಲಿ ನಾಗಯಕ್ಷಿಯ ಪುನರ್ ಪ್ರತಿಷ್ಠಾಪನೆ ಆಗಿದೆ. ಪುನರ್ ಪ್ರತಿಷ್ಠಾಪನಾ ಕಾರ್ಯ ಸರಿಯಾಗಿ ನಡೆದಿದೆಯೇ, ನಾಗಯಕ್ಷಿ ನಾವು ಮಾಡಿದ ಸೇವೆಯಿಂದ, ಕರ್ತವ್ಯದಿಂದ ಸಂತೃಪ್ತಳೇ ಎಂದು ಕೇಳಿದೆ. ಆಗ ಮತ್ತೆ ಪ್ರಶ್ನೆ ನೋಡಿದ ಶರ್ಮರು ಹೀಗೆ ಹೇಳಿದರು "ನಿನ್ನ ಮೊದಲಿನ ಪ್ರಶ್ನೆಗೆ ಕೂಡ ಇಲ್ಲಿ ಈಗ ಉತ್ತರ ಸಿಕ್ಕಿದೆ". ನೀವು ಮಾಡಿದ ಕಾರ್ಯದಿಂದ ನಾಗಯಕ್ಷಿ ಸಂತೃಪ್ತಲಾಗಿದ್ದಾಳೆ. ನಿಮ್ಮ ಬನದ ಎದುರು ಈಶಾನ್ಯ ಭಾಗದಲ್ಲಿ ಒಂದು ಸ್ಥಳವಿದೆ. ಈ ಸ್ಥಳದಲ್ಲಿ ಇಂತಿಂಥ ಕುರುಹುಗಳಿವೆ. ನಿನ್ನ ಈ ಒತ್ತಡದ ಸ್ಥಿತಿಗೆ ಈ ಸ್ಥಳದಲ್ಲಿರುವ ದೈವೀ ಶಕ್ತಿ ಕಾರಣವಾಗಿದೆ. ಅಲ್ಲಿ ಒಂದು ಹಾಳು ಬಾವಿ ಒಂದು ಕಟ್ಟೆ ಮತ್ತು ದೊಡ್ಡ ದೊಡ್ಡ ಹೊಂಡಗಳು ಇರುವಂತೆ ಕಾಣುತ್ತದೆ. ನೀನು ಇಲ್ಲಿಂದ ನೇರವಾಗಿ ನಿಮ್ಮ ಬನಕ್ಕೆ ಹೋಗು. ಅಲ್ಲಿ ಪ್ರಾರ್ಥಿಸಿ ಬನದ ಎದುರು ನಾನು ಹೇಳಿದ ಸ್ಥಳಕ್ಕೆ ಹೋಗಿ ನಾನು ಹೇಳಿದ ಕುರುಹುಗಳಿವೆಯೇ ನೋಡು. ಇನ್ನು ಇಲ್ಲಿ ಹೆಚ್ಚೇನು ಹೇಳೋದಿಲ್ಲ. ಆ ಕಾಡಿನಲ್ಲೇ ಆರೂಢ ಪ್ರಶ್ನೆ ಇಡುವ ಎಂದು ಶ್ರೀಶರ್ಮರು ತಿಳಿಸಿದಂತೆ ಶ್ರೀ ಶರ್ಮರು ತಿಳಿಸಿದ ದಿನಾಂಕದಂದು ಐಂಗಳ ಕಟ್ಟೆಯಲ್ಲಿ ಆರೂಢ ಪ್ರಶ್ನೆ ಇಡಲಾಯ್ತು.
ಆರೂಢ ಪ್ರಶ್ನೆಯಲ್ಲಿ ತಿಳಿದು ಬಂದ ಈ ವಿಚಾರವನ್ನು ಮೂಳೂರು ಗ್ರಾಮದ ಎಲ್ಲಾ ಜಾತಿ ಮತ ಧರ್ಮದ ಜನರಿಗೆ ಜೂನ್ 2004ರಲ್ಲಿ ಕರ ಪತ್ರದ ಮೂಲಕ ತಿಳಿಸಿರುತ್ತೇನೆ. ಬೈಲು ಮನೆ ಬಾಬು ಶೆಟ್ರು ಹೊರತು ಬೇರೆ ಯಾರೂ ಈ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಬೈಲು ಮನೆ ಬಾಬು ಶೆಟ್ಟಿಯವರು ನನಗೊಂದು ಪತ್ರ ಬರೆದು ತನ್ನನ್ನು ಕರೆಸಿ ತನ್ನ ಬಳಿ ಇದ್ದ 1976ರಲ್ಲಿ ಉಲ್ಲಾಯ ಕೊಡಮಣಿತ್ತಾಯ ಬೊಬ್ಬರ್ಯ ಸ್ಥಾನದ ಜೀರ್ಣೋದ್ಧಾರದ ಕಾಲದಲ್ಲಿ ನಿರಂತರ ಬೆಳಿಗ್ಗೆ-ಸಂಜೆ ಕೆಲವು ದಿನ (ಕೇರಳದ ಪುದುವಾಳರಿಂದ) ಇಡಲಾಗಿದ್ದ 200 ಪುಟ ಬರೆದ ಅಷ್ಟಮಂಗಲದ ಪುಸ್ತಕ ನನಗೆ ನೀಡಿದರು. ನಾನು ಬಹಳ ಆಸಕ್ತಿಯಿಂದ ಅದನ್ನು ಪಡೆದು ಓದಿ ಅದರಲ್ಲಿರುವ ಪ್ರಮುಖ ವಿಚಾರ ಬರೆದು ಇಟ್ಟುಕೊಂಡು 15 ದಿನದಲ್ಲೇ ಆ ಪುಸ್ತಕ ಅವರಿಗೆ ಹಿಂತಿರುಗಿಸಿರುತ್ತೇನೆ. ಅದರಲ್ಲಿದ್ದ ಪ್ರಮುಖ ವಿಚಾರಗಳು "ಐಯ್ಯಂಗಳ ಕಟ್ಟೆ ಒಂದು ಮಹಿಮಾ ವಿಶೇಷ ಸ್ಥಳ, ವಿಶೇಷ ಸರ್ಪ ಸಾನಿಧ್ಯವಿರುವ ಸ್ಥಳ ದೇವರು ನರ್ತನ ಮಾಡುವ ಸ್ಥಳ". ಈ ಸ್ಥಳದಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಬಾವಿ ಮತ್ತು ಕಟ್ಟೆಯನ್ನು ಜೀರ್ಣೋದ್ಧಾರಗೊಳಿಸಿ ಅದಕ್ಕೆ ಸುತ್ತ ಆವರಣ ನಿರ್ಮಿಸಿ ಸದಾ ಸ್ವಚ್ಛ ಮತ್ತು ಶುದ್ಧಾಚಾರದಲ್ಲಿಡಬೇಕು. ಉಲ್ಲಾಯ ಕೊಡಮಣಿತ್ತಾಯ ಬೊಬ್ಬರ್ಯ ಕ್ಷೇತ್ರದಲ್ಲಿ ನೀಡುವ ತುಡರ್ ಇತ್ಯಾದಿ ಸೇವೆಯ ಮೊದಲು ಈ ಐಯ್ಯಂಗಳ ಕಟ್ಟೆಗೆ ಎಲ್ಲಾ ಭಕ್ತಾದಿಗಳು (ಮುಕ್ಕಾಲ್ದಿ ಮೊಕ್ತೇಸರರು ಸಹಿತ) ಸೇರಿ ಪ್ರಾರ್ಥನೆ ಸಲ್ಲಿಸಿ ನಂತರ ಈ ಕ್ಷೇತ್ರದಲ್ಲಿ ಸೇವೆ ನೀಡಬೇಕು. ಪಕ್ಕದಲ್ಲೆ ಇರುವ ದೈವದ ಸ್ಥಳಕ್ಕೆ ಸುತ್ತ ಆವರಣ ನಿರ್ಮಿಸಬೇಕು ಇತ್ಯಾದಿ ಇತ್ಯಾದಿ ಮಾತ್ರವಲ್ಲದೆ 1976ರಲ್ಲಿ (1-10-1976ರ ಮೊದಲು) ನಾನು ಅದೇ ಮೊದಲ ಬಾರಿ ಅಮ್ಮನೊಂದಿಗೆ ಉಡುಪಿಯ ಕೆಮ್ಮಣ್ಣಿನ ನದಿ ದಡದಲ್ಲಿರುವ ನವದುರ್ಗೆಯ ಕ್ಷೇತ್ರಕ್ಕೆ ಹೋದ ಕಾಲದಲ್ಲಿ ನವದುರ್ಗೆಯ ಗುಡಿ ಎದುರು ಸ್ಪಷ್ಟವಾದ ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸೂಚನೆಯನ್ನು ಅನುಭವಿಸಿದ್ದೆ (ನನ್ನ ಮುಖ ಜೋರಾಗಿ ಅಳುವ ಸ್ಥಿತಿಗೆ ಒಳಗಾಗಿರುವುದು) 2004ರಲ್ಲಿ ಶ್ರೀ ದೇವಿದಾಸ ಶರ್ಮರು ಐಯ್ಯಂಗಳ ಕಟ್ಟೆಯಲ್ಲಿ ಆರೂಢ ಪ್ರಶ್ನೆ ಇಟ್ಟ ಕಾಲದಲ್ಲಿ ಈ ಅಳುವ ಸ್ಥಿತಿ ಸುಮಾರು 10 ನಿಮಿಷಗಳ ಕಾಲ ಇದ್ದು ಈ ಸ್ಥಿತಿಗೆ ದೇವಿಯೇ ಕಾರಣ ಎಂದು ನಾನು ಭಾವಿಸಿದ್ದೇನೆ. 1976 ರಿಂದ ಇಂದಿನವರೆಗೂ ನಾನು ಬಹಳಷ್ಟು ಸಾನಿಧ್ಯದಲ್ಲಿ ಜೋರಾಗಿ ಅಳುವ ಸ್ಥಿತಿಗೆ ಒಳಗಾಗಿದ್ದೇನೆ.
ಶ್ರೀ ದೇವಿದಾಸ ಶರ್ಮರು ಐಯ್ಯಂಗಳ ಕಟ್ಟೆಯಲ್ಲಿ ಆರೂಢ ಪ್ರಶ್ನೆ ಇಟ್ಟು ದೇವಿಯ ಸಾನಿಧ್ಯ ಇರುವ ಬಗ್ಗೆ ತಿಳಿಸುವ ಕೆಲವು ತಿಂಗಳ ಮೊದಲು ನಾನು ದೇವಿಯ ಬಗ್ಗೆ ಒಂದು ಸ್ವಪ್ನ ನೋಡಿದ್ದೇನೆ ಮಾತ್ರವಲ್ಲದೆ ಶ್ರೀಶರ್ಮರು ಆರೂಢ ಪ್ರಶ್ನಾ ಕಾಲದಲ್ಲಿ ತಿಳಿಸಿದಂತೆ ಪ್ರಶ್ನೆಯ ನಂತರದ ದಿನಗಳಲ್ಲಿ ಹಲವಾರು ಸ್ವಪ್ನಗಳನ್ನು ನೋಡಿದ್ದೇನೆ. ಸ್ವಪ್ನಗಳು ಶ್ರೀಶರ್ಮರು ಹೇಳಿದ ಎಲ್ಲಾ ಮಾತುಗಳನ್ನು ದೃಢಿಕರಿಸುತ್ತವೆ.
ಈ ಎಲ್ಲಾ ಕನಸುಗಳು ಬೆಳಿಗಿನ ಜಾವ ಬಿದ್ದಿದ್ದು. ಕನಸು ನಿಂತ ತಕ್ಷಣ ಎಚ್ಚರವಾದ ಕಾರಣ ಕೂಡಲೇ ಎದ್ದು ಈ ಸ್ವಪ್ನ ಬಿದ್ದ ದಿನ, ಎಚ್ಚರವಾದ ಸಮಯ ಮತ್ತು ಸ್ವಪ್ನದ ವಿವರ ಬರೆದಿಟ್ಟುತ್ತೇನೆ.
ಈ ನಡುವೆ ದಿನಾಂಕ 27-11-2011ರಂದು ಮೂಡಬಿದ್ರಿ ಸಮೀಪದ ಒಬ್ಬ ಸ್ವಾಮೀಜಿಯವರ ವಿಚಾರವಾಗಿ ನಡೆದ ವಿದ್ಯಾಮಾನದ ಪರಿಣಾಮವಾಗಿ 28-11-2011ರಂದು ಬೆಳಿಗ್ಗೆ ಮೂಳೂರಿನ ಕೆಲವು ಪ್ರಮುಖ ವ್ಯಕ್ತಿಗಳು ಒಟ್ಟಾಗಿ ನನ್ನನ್ನು ಮೂಳೂರಿನ ಕೊಡಮಣಿತ್ತಾಯ ಸ್ಥಾನಕ್ಕೆ ಕರೆಸಿ ಸುಮಾರು 1.50 ಕೋಟಿ ವೆಚ್ಚದಲ್ಲಿ ಕೊಡಮಣಿತ್ತಾಯ ಕ್ಷೇತ್ರ ಜೀರ್ಣೋದ್ಧಾರವಾಗಲಿದೆ. ಈ ಕಾಲದಲ್ಲಿ ಶ್ರೀ ದೇವಿಗೂ ಗುಡಿ ನಿರ್ಮಿಸಲಾಗುವುದು. ನಿಮ್ಮ ಕುಟುಂಬ ಈ ಸಂದರ್ಭದಲ್ಲಿ ಎಷ್ಟು ಹಣ ಸಂಗ್ರ್ರಹಿಸಿ ನೀಡಲು ಸಾಧ್ಯವಿದೆಯೋ ಅಷ್ಟನ್ನು ನೀಡಿ ಎಂದು ಶ್ರೀ ಜಯರಾಮ ಶೆಟ್ಟಿ ಮೂಳೂರು ಇವರು ಹೇಳಿದರು. ಈ ಮಾತನ್ನು ಸಾನಿಧ್ಯದಲ್ಲಿ ದೀಪ ಹಚ್ಚಿ ಪ್ರಾರ್ಥಿಸಿ ಹೇಳಬೇಕೆಂಬ ನನ್ನ ಕೋರಿಕೆಯಂತೆ ಮುಕ್ಕಲ್ದಿಯವರು ದೀಪ ಹಚ್ಚಿದರು. ಸೇರಿದ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಆಡಳಿತ ಮೊಕ್ತೇಸರು ಇದೇ ರೀತಿ ಪ್ರಾರ್ಥಿಸಿದರು. ಶ್ರೀ ದೇವಿಯ ಗುಡಿ ನಿರ್ಮಾಣದ ಜವಾಬ್ದಾರಿ ಊರವರು ವಹಿಸಿಕೊಂಡರೆಂದು ನಾನು ಸಂತೋಷಗೊಂಡಿದ್ದೆ. ಈ ಬಗ್ಗೆ ಇವರಿಗೆ ನೀಡಲು ಒಂದೆರಡು ದಿನದಲ್ಲೇ ಬ್ಯಾಂಕಲ್ಲಿ ಪ್ರತ್ಯೇಕ ಖಾತೆ ತೆರೆದು ಕುಟುಂಬದಿಂದ ಹಣ ಸಂಗ್ರಹಿಸಿ ಇವರಿಗೆ ನೀಡಲು ಖಾತೆಯಲ್ಲಿ ಜಮಾ ಮಾಡಲು ಆರಂಭಿಸಿದೆ.
30-01-2013ರಂದು ನಾನು ರಾತ್ರಿ ಮತ್ತೆ ಶ್ರೀ ದೇವಿಯ ಸ್ವಪ್ನ ನೋಡಿದೆ. ಬೆಳಕಿನಿಂದ ಕಂಗೊಳಿಸುವ ರಂಗ ಸ್ಥಳದಂತೆ ಕಾಣುವ ಸ್ಥಳದಲ್ಲಿ ಸಿಂಹದೊಂದಿಗೆ ಶ್ರೀ ದೇವಿಯು ಕಾಣಿಸಿಕೊಂಡಳು. ಬಲ ಭಾಗದಲ್ಲಿ ಇನ್ನೊಂದು ಕಪ್ಪು ಮನುಷ್ಯಾಕೃತಿ ಇತ್ತು. ಶ್ರೀ ದೇವಿಯು ಎದುರು ಬದಿಯಿಂದಲೇ ರಂಗಸ್ಥಳದಿಂದ ಸಿಂಹ ಸಮೇತ ಹೊರಗೆ ಬಂದಳು. ಎದುರಲ್ಲಿ ಇದ್ದ ಕೆಲವು ವ್ಯಕ್ತಿಗಳಲ್ಲಿ ಹಣ ಕೇಳುತ್ತಾ ಒಂದೆರಡು ನಿಮಿಷದಲ್ಲಿ ನನ್ನ ಬಲ ಭಾಗದಲ್ಲಿ ನನ್ನ ಬದಿಯಲ್ಲಿ ಬಂದು ನನ್ನತ್ರ ಹಣ ಕೇಳಿದಳು. ನಾನು ಒಂದು ಕುರ್ಚಿಯಲ್ಲಿ ಮೇಜಿನೆದರು ಕುಳಿತಿದ್ದೆ. ಕುಳಿತ ನನ್ನ ಬಲ ಭಾಗದಲ್ಲಿ ರಂಗಸ್ಥಳ ಇದ್ದು ಅದು ನನಗಿಂತ ಸುಮಾರು 50 ಅಡಿ ದೂರದಲ್ಲಿರಬಹುದು. ನನ್ನ ಮೇಜಿನ ಎಡ ಭಾಗದ ಮೂಲೆಯಲ್ಲಿ ರೂ.10-00 ಗಳ ಕೆಲವು ನೋಟುಗಳಿದ್ದವು. ಅದರಲ್ಲಿ ಒಂದು ನೋಟನ್ನು ನಾನು ತೆಗೆದು ಶ್ರೀ ದೇವಿಗೆ ನೀಡಿ ದೇವೆರ್ ನಟ್ಟುನಾ ಎಂದು ದೇವಿಯನ್ನು ನೋಡಿ ಕೇಳುತ್ತೇನೆ. ಇದಾದ ನಂತರ ಊರಿನ ಕೆಲವು ಯುವಕರು ಐಯ್ಯಂಗಳ ಕಟ್ಟೆಯ ಮರಗಳನ್ನು ಕಡಿಯುವುದನ್ನು ಕನಸಲ್ಲಿ ನೋಡುತ್ತೇನೆ.
ಈ ಕನಸನ್ನು ನೋಡಿದ ನಾನು ಈ ಸರಿ ಖಂಡಿತಾ ಶ್ರೀ ದೇವಿಗೆ ಗುಡಿ ನಿರ್ಮಾಣ ಆಗುತ್ತದೆ. ಊರವರು 28-11-2011ರಂದು ನನಗೆ ತಿಳಿಸಿದಂತೆ ಖಂಡಿತಾ ದೇವಿಗೆ ಗುಡಿ ನಿರ್ಮಿಸುತ್ತಾರೆಂದು ಭಾವಿಸಿ ಬೇಗ ಬೇಗ ಹಣ ನೀಡಲು ಕುಟುಂಬಕ್ಕೆ ಪತ್ರ ಬರೆದು ತಿಳಿಸಿದೆ.
30-04-2013 ರಿಂದ ನಾನು ಶ್ರೀ ದೇವಿಗೆ ಗುಡಿ ನಿರ್ಮಿಸಬೇಕೆಂಬ ತೀವ್ರ ಒತ್ತಡಕ್ಕೆ ಒಳಗಾದೆ. ಈ ಒತ್ತಡ ದಿನೇ ದಿನ ಹೆಚ್ಚಾಗುತ್ತಾ ಇತ್ತು. ಈ ಬಾರಿ ಒತ್ತಡ ಯಾಕೆಂದು ಸ್ಪಷ್ಟವಾಗಿತ್ತು. 2004ರಲ್ಲಿ ಶ್ರೀ ದೇವಿದಾಸ ಶರ್ಮರು ಬರೆದು ಕೊಟ್ಟ ಪ್ರಶ್ನೆಯನ್ನು ಹುಡುಕಾಡಿ ಒಂದು ಫೈಲ್ ಮಾಡಿ ಅದನ್ನು ಓದಿ ಅರ್ಥ ಮಾಡಿಕೊಂಡೆ, ಅದಕ್ಕೆ ಪೂರಕವಾದ ಕೆಲವು ದಾಖಲೆಗಳನ್ನು ಕೂಡ ಫೈಲ್ ಮಾಡಿಕೊಂಡೆ. ನಾನೇನು ಮಾಡಬೇಕಾಗಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದ ಕಾರಣ ತಡ ಮಾಡದೆ ಒಂದು ದಿನ ಬೆಳಿಗ್ಗೆ ಪಾಂಗಾಳದ ಶ್ರೀ ಜನಾರ್ಧನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸಿ ಅದೇ ಮೊದಲ ಬಾರಿ ಪಾಂಗಾಳದಲ್ಲಿದ್ದ ಜ್ಯೋತಿಷಿ ಶ್ರೀ ಪ್ರಕಾಶ್ ಅಮ್ಮನ್ನಾಯರ ಬಳಿ ಹೋಗಿ ಎಲ್ಲಾ ವಿಚಾರಗಳನ್ನು ತಿಳಿಸಿದೆ. ಎಲ್ಲಾ ವಿಚಾರಗಳನ್ನು ಕೇಳಿಸಿಕೊಂಡ ಶ್ರೀ ಪ್ರಕಾಶ್ ಅಮ್ಮನ್ನಾಯರು ಶ್ರೀ ದೇವಿಯ ಇಚ್ಛೆಯಂತೆ ಶ್ರೀ ದೇವಿಗೆ ಗುಡಿ ನಿರ್ಮಾಣ ಮಾಡಿ ದೇವಿಯ ಇಚ್ಛೆಯಂತೆ ದೇವಿ ತಿಳಿಸಿದ ಜಾಗದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡುವ ಕಾರ್ಯವನ್ನು ಧೈರ್ಯವಾಗಿ ಕೈಗೆತ್ತಿ ಕೋ ತಾಯಿ ಅವಳಿಗೆ ಬೇಕಾದಂತೆ ಅವಳೇ ಮಾಡಿಸಿಕೊಳ್ಳುತ್ತಾಳೆ. ಧೈರ್ಯದಿಂದ ಹೊರಡು ಎಂದರು. ಅವರಿಗೆ ನಮಸ್ಕರಿಸಿ ಅಲ್ಲಿಂದಲೇ ಶಿಬರೂರು ಕೊಡಮಣಿತ್ತಾಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಈ ಬಗ್ಗೆ ಪ್ರಾರ್ಥಿಸಿ ಮೇ 2013 ರಿಂದಲೇ ಇದಕ್ಕೆ ಬೇಕಾದ ಒಂದೊಂದೇ ತಯಾರಿಯನ್ನು ಮಾಡಿಕೊಂಡೆ. ಶ್ರೀ ದೇವದಾಸ ಶರ್ಮರು ಬರೆದು ಕೊಟ್ಟ ಪ್ರಶ್ನೆಯ ಪ್ರತಿಯನ್ನು ಶಿಬರೂರು ಶ್ರೀ ವಾಸುದೇವ ಆಚಾರ್ಯರಿಗೆ ನೀಡಿ ಶ್ರೀ ಶರ್ಮರು ಬರೆದು ಕೊಟ್ಟಂತೆ ಶ್ರೀ ದೇವಿಯ ದಾರುಪೀಠ ಪ್ರತಿಷ್ಠೆ ಮಾಡಲು ತಿಳಿಸಿದೆ. ಅಂದು ಕೊಂಡಂತೆ ಶ್ರೀ ದೇವಿಯ ಇಚ್ಛೆಯಂತೆ ದಿನಾಂಕ 14-04-2014ರಂದು ಶಿಬರೂರು ಶ್ರೀ ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಶ್ರೀ ದೇವಿಯ ದಾರುಪೀಠ ಪ್ರತಿಷ್ಠೆಯು ನಿರ್ವಿಷ್ನವಾಗಿ ಬಹಳ ವಿಜೃಂಭಣೆಯಿಂದ ನೆರವೇರಿತು. ಪ್ರಶ್ನೆಯಲ್ಲಿ ತಿಳಿಸಿದಂತೆ ಅರ್ಚಕನಾಗಿ ತಂತ್ರಿಗಳು ಶ್ರೀ ದೇವಿಗೆ ಪ್ರಾರ್ಥನಾ ಮೂಲಕ ನನ್ನನ್ನು ನೇಮಿಸಿದರು. ಅದರಂತೆ ಪ್ರತಿ ತಿಂಗಳು ಸಂಕ್ರಾಂತಿಗೆ ಒಂದು ದಿನ ದೇವಸ್ಥಾನದ ಬಾಗಿಲು ತೆರೆದು ಶುದ್ಧಾಚಾರದಲ್ಲಿ ದೇವಿಗೆ ಪೂಜೆ ಮಾಡಲಾಗುತ್ತದೆ. ನವರಾತ್ರಿಯ 9 ದಿನ ನವರಾತ್ರಿ ಪೂಜೆ ಮಾಡಲಾಗುತ್ತದೆ. ವರ್ಧಂತಿಯ ದಿನ ಶ್ರೀ ದೇವಿಯ ಸಾನಿಧ್ಯದಲ್ಲಿ ಸ್ಥಳ ಶುದ್ಧಿ, ಗಣ ಹೋಮ, ಚಂಡಿಕಾ ಹೋಮ ಇತ್ಯಾದಿ ಪೂಜೆಗಳು ಶಿಬರೂರು ಶ್ರೀ ವಾಸುದೇವ ಆಚಾರ್ಯರ ನೇತೃತ್ವದಲ್ಲಿ ನಡೆಯುತ್ತಿದೆ.
ಶ್ರೀ ದೇವಿದಾಸ ಶರ್ಮ ಪಡುಬಿದ್ರಿ ಇವರು ದಿನಾಂಕ 29-05-2004ರಲ್ಲಿ ಆರೂಢ ಪ್ರಶ್ನೆಯಲ್ಲಿ ತಿಳಿಸಿದ ವಿಚಾರ ಮತ್ತು ಇದಕ್ಕಿಂತ ಮೊದಲು ಮತ್ತು ನಂತರದ ಕೆಲವು ದಿನಗಳಲ್ಲಿ ನನಗೆ ಬಿದ್ದ ಹಲವಾರು ಸ್ವಪ್ನಗಳ ಮುಖೇನ ತಿಳಿದು ಬಂದ ವಿಚಾರಗಳ ಆಧಾರದ ಮೇಲೆ ನಾನು ಈ ದೇವಿಗೆ ಶ್ರೀದೇವಿ ತ್ರಿಕಣ್ಣೇಶ್ವರಿ ಅಮ್ಮನವರು ಎಂದು ಹೆಸರಿಟ್ಟಿರುತ್ತೇನೆ. ಸ್ವಪ್ನದಲ್ಲಿ ಬೇರೆ ಬೇರೆ ದಿನಗಳಲ್ಲಿ ಸಿಂಹದೊಂದಿಗೆ ಇರುವ ದೇವಿ, ಹುಲಿಯ ಮೇಲೆ ಕುಳಿತುಕೊಂಡ ದೇವಿ ಮತ್ತು ಸುಮಂಗಲಿಯರಿಂದ ಸುತ್ತುವರಿದ ದೇವಿ ಮತ್ತು ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿದ್ದ ಗರ್ಭ ಗುಡಿಯೊಳಗೆ ಬಹಳ ಸುಂದರವಾಗಿ ಹೂ ಮತ್ತು ಆಭರಣಗಳಿಂದ ಕಂಗೊಳಿಸುವ ದೇವಿಯನ್ನು ಕಂಡಿದ್ದೇನೆ. ಕನಸಿನ ಆಧಾರದಲ್ಲಿ ಇವರಲ್ಲಿ ಒಂದು ದೇವಿಯು ವನದುರ್ಗಿ ದೇವಿ ಆಗಿರಬಹುದೆಂದು ಬರೆದಿಟ್ಟಿರುತ್ತೇನೆ.
ಶ್ರೀ ದೇವಿದಾಸ ಶರ್ಮರ ಸಲಹೆಯಂತೆ ಮೂಳೂರು ಐಯಂಗಳ ಕಟ್ಟೆಯಲ್ಲಿ 29-05-2004ರಲ್ಲಿ ಆರೂಧ ಪ್ರಶ್ನೆ ಇಟ್ಟ ಕಾಲದಲ್ಲಿ ತಿಳಿದು ಬಂದ ವಿಚಾರಗಳು ಶ್ರೀ ಶರ್ಮರು ಬರೆದುಕೊಟ್ಟಂತೆ ಈ ಕೆಳಗಿನಂತಿದೆ.
ಶ್ರೀ ಗಣೇಶಾಯನಮ:ತಾರೀಕು 29-05-2004ನೇ ಶನಿವಾರ ಪೂರ್ವಹ್ನ 10.24ಕ್ಕೆ ಉದಯಾದಿ ಘಟಿ 10.52ಕ್ಕೆ ಮೂಳೂರು ಐಂಗಳ ಕಟ್ಟೆ ಸ್ಥಳದಲ್ಲಿ ಸ್ಥಳದ ಸಾನಿಧ್ಯ ಹಾಗೂ ಇತರ ವಿಷಯಗಳ ಬಗ್ಗೆ ದೈವ ದೇವರುಗಳನ್ನು ಪ್ರಾರ್ಥಿಸಿ ಸದಾಶಿವ ಶೆಟ್ಟಿಯವರ ಹೆಸರಿನಲ್ಲಿ ಚಿಂತಿಸಿದಾಗ ಬಂದ ಆರೂಢ ರಾಶಿ ಮೇಷ ಉದಯ ಲಗ್ನ ಹಾಗೂ ಫತ್ರರಾಶಿ ಕರ್ಕಾಟಕ ¯ಗ್ನಾಂಶ ರಾಶಿ ವೃಶ್ಚಿಕ ತಾಂಬೂಲ ಸಂಖ್ಯೆ 11 ತಾಂಬೂಲಗ್ರಹ ಶುಕ್ರರಾಶಿ ವೃಷಭ ||
ತಾಂಬೂಲ ರಾಶಿ ಪ್ರಕಾರ ಪ್ರಾಚೀನ ಕಾಲದಲ್ಲಿ ದೇವಿಯ ಆರಾಧನೆಯ ಸ್ಥಳವು ಇಲ್ಲಿದ್ದು ಅದು ಕಾಲ ಕ್ರಮೇಣ ನಷ್ಟವಾಗಿ ಹೋದ ಲಕ್ಷಣ ಕಾಣುತ್ತದೆ. ಅತೀ ಪ್ರಾಚೀನ ಕಾಲದಲ್ಲಿ ಜೈನ ಸಮುದಾಯಕ್ಕೆ ಸಂಬಂಧವಿದ್ದು ಆಮೇಲೆ ಲಿಂಗಾಯಿತರ ಆಕ್ರಮಣದಿಂದ ಅವರ ಆಡಳಿತಕ್ಕೆ ಸಂಬಂಧಪಟ್ಟು. ಈ ಸ್ಥಳದಿಂದ ಪೂರ್ವ ಭಾಗದಲ್ಲಿ ಈಶ್ವರನ ಸಾನಿಧ್ಯವುಳ್ಳ ಅವರ ಪಂಥದ ಮಠವು ಇದ್ದಂತೆ ಕಾಣುತ್ತದೆ. ಈಗ ಇರುವ ಸ್ಥಳವು ಪ್ರಾಚೀನ ಸ್ಥಳದ 1/6 ಅಂಶ ಇದ್ದಂತೆ ಕಾಣುತ್ತದೆ. ಈ ಸ್ಥಳದ ಬೊಬ್ಬರ್ಯ ಸ್ಥಾನದ ಪಶ್ಚಿಮ ದಕ್ಷಿಣ ಭಾಗದಲ್ಲಿ ಜಲಾಶಯವಿದ್ದು ಅದರ ದಕ್ಷಿಣ ಭಾಗದಲ್ಲಿ ಪೂರ್ವ ದಿಕ್ಕಿನಿಂದ ದೈವೀ ಶಕ್ತಿಯ ಪಶ್ಚಿಮದಲ್ಲಿರುವ ನಿಧಿ ಪ್ರದೇಶವಾಗಿರುವ ಈ ಜಲಾಶಯದ ಬಳಿಗೆ ಸಂಚಾರ ಮಾಡುತ್ತಿರುವಂತೆ ಕಾಣುತ್ತದೆ. ಈ ಸ್ಥಳದಲ್ಲಿ ಬ್ರಹ್ಮಸ್ಥಾನ ಜೀರ್ಣೊಧ್ಧಾರವಾಗಿ ನಾಗಯಕ್ಷಿಯ ಪ್ರತಿಷ್ಠಾಪನೆಯಾಗಿರುವುದರಿಂದ ಸ್ಥಾನ ಬ್ರಷ್ಟವಾದ ಈ ದೈವಿ ಶಕ್ತಿಯು ಪೂರ್ವ ಜನ್ಮದ ಉಪಸನಾ ಬಲದಿಂದ ತನಗೊಂದು ಸ್ಥಾನ ಕೊಡು ಎಂದು (ನನ್ನಲ್ಲಿ) ಕೇಳುತ್ತದೆ. ಈ ದೈವೀ ಶಕ್ತಿಯ ಸ್ಥಳದಲ್ಲಿಯೇ ಕೊಡಮಣಿತ್ತಾಯ, ಬೊಬ್ಬರ್ಯ, ಬ್ರಹ್ಮಸ್ಥಾನ, ನೀಚ ದೈವಸ್ಥಾನ ಇರುತ್ತದೆ. ಅತೀ ಪ್ರಾಚೀನ ಕಾಲದಲ್ಲಿ ಇಲ್ಲಿಂದ ಆಗ್ನೇಯ ಭಾಗದಲ್ಲಿ ಒಂದು ಬ್ರಾಹ್ಮಣ ಮನೆ ಇದ್ದು ಆ ಜಾಗದಲ್ಲಿ ನನ್ನ ಆರಾಧನೆಯು ನಡೆಯುತ್ತಿತ್ತು. ನೀಚ ಸಮಾಜದಿಂದ ಆ ಬ್ರಾಹ್ಮಣರ ಮನೆತನಕ್ಕೆ ಹಾನಿ ಉಂಟಾಗಿ ಆ ಜಾಗವು ಹಾಳಾಗಿ ಹೋಗಿರುತ್ತದೆ. ಈ ಸ್ಥಳದಲ್ಲಿ ಕೊಡಮಣಿತ್ತಾಯ ಬೊಬ್ಬರ್ಯ ಸ್ಥಾನದ ಆರಾಧನೆಯು ಎಲ್ಲರ ಕೂಡುವಿಕೆಯಿಂದ ಆಗುತ್ತಿಲ್ಲ. ಈ ದೇವಿಗೆ ಸ್ಥಾನ ಕಲ್ಪನೆ ಮಾಡಿದಲ್ಲಿ ಎಲ್ಲರೂ ಒಮ್ಮತದಿಂದ ದೈವ ಆರಾಧನೆ ಮಾಡುವ ಲಕ್ಷಣ ಕಾಣುತ್ತದೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕಾಗುತ್ತದೆ.
ಸಂಕಲ್ಪ ಮಾಡಿದ ಸ್ಥಳದಲ್ಲಿ ದೇವಿಗೆ ಸ್ಥಳ ಶೋಧನೆ ಪೂರ್ವಕ ಚಿಕ್ಕ ಒಂದು ಗುಡಿಯನ್ನು ಕಲ್ಪಿಸಿ ಹಲಸಿನ ಮರದ ಪೀಠದ ಮೇಲೆ ಬಿಂಬ ಶುದ್ಧಿ ಪೂರ್ವಕ ಆದಿಶಕ್ತಿ ರೂಪದಲ್ಲಿ ದೇವಿಯನ್ನು ಆಹ್ವಾನಿಸಿ ಸ್ವಸ್ತಿಕ ಇಟ್ಟು ಪೂಜೆ ಮಾಡುವುದು ಅರ್ಚಕರಾಗುವವರು ಪುರೋಹಿತರಿದ್ದು ಪ್ರಾರ್ಥಿಸಿ ಅನುಮತಿ ಪಡೆಯಬೇಕು. ಹೀಗೆ ಅನುಮತಿ ಪಡೆದ ಕುಟುಂಬ ಸದಸ್ಯರು ಮಾತ್ರ ಪೂಜೆ ಮಾಡಬೇಕು. ಈ ಮಂಚದ ಮೇಲೆ (ಮರದ ಪೀಠ) ಶಂಖ, ಚಕ್ರ, ಅಭಯ, ವರದ ಹೀಗೆ 4 ಕೈಗಳುಳ್ಳ 3 ಕಣ್ಣು ಮತ್ತು ಕಿರೀಟದ ಮೇಲೆ ಚಂದ್ರ ಕಲೆಯುಳ್ಳ ಪೀಠದಲ್ಲಿ ಸಿಂಹ ಲಾಂಛನವುಳ್ಳ ಕೊಲ್ಲೂರು ಮುಕಾಂಬಿಕೆಯ ಆಕಾರದ ಒಂದು ಅರ್ದಾಬಾಸದ ಚಿತ್ರವುಳ್ಳ ಪೋಟೋವನ್ನು ಇಡಬೇಕು. ಇದಕ್ಕೆ ಆಲಯ ಶುದ್ಧಿ ಮತ್ತು ಬಿಂಬ ಶುದ್ಧಿ ಪೂರ್ವಕ ಪ್ರತಿಷ್ಠೆ ಮಾಡಿ ಸಂಕ್ರಾಂತಿಗೆ ಒಂದು ಸಲ ಬಾಗಿಲು ತೆರೆದು ಸ್ವಚ್ಛ ಮಾಡಿ ಹೂ, ನೀರು ಇಟ್ಟು ಆರಾಧನೆ ಮಾಡಬೇಕು. ನವರಾತ್ರಿಯ 9 ದಿನ ಸಾಯಂಕಾಲ ಪೂಜೆ ಮಾಡಬೇಕು. ವಿಶೇಷ ಪೂಜೆ ಇದ್ದರೆ ಸಂಕ್ರಾಂತಿ ದಿನ ಮಾಡಬೇಕು. ದಿನಾಲೂ ಸಾಯಂಕಾಲ ಕನ್ನಡಿಯ ಆವರಣವುಳ್ಳ ದೀಪವನ್ನು ಹಚ್ಚಬೇಕು. ಹೂವನ್ನು ಹೊಸ್ತಿಲ ಮೇಲೆ ಇಡಬೇಕು. ವರ್ಷಕ್ಕೊಮ್ಮೆ ವರ್ಧಂತಿ ಆಚರಣೆ ಮಾಡೋದು. ದಿನಾಲೂ ಹೊಸ್ತಿಲ ಮೇಲೆ ತಟ್ಟೆಯನಿಟ್ಟು ಹೂ ಕುಂಕುಮ ಹಾಕಿ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು. ಪ್ರತೀ ತಿಂಗಳಿಗೊಮ್ಮೆ ಸಂಕ್ರಾಂತಿಗೆ (ಸೋಮವಾರ ಬಿಟ್ಟು) ನಾಗಾಭಿಷೇಕ ಮಾಡುವುದು. ವರ್ಧಂತಿಯ ದಿನ ಗಣಹೋಮ, ವಿಶೇಷ ಪೂಜೆ ಮಾಡುವುದು. ನಿವೃತಿ ರಾಶಿ ಸಿಂಹ
ವಿಶೇಷ ಸೂಚನೆ:-2004ರಲ್ಲಿ ಆರೂಢ ಪ್ರಶ್ನೆಯಲ್ಲಿ ತಿಳಿಸಿದಂತೆ ಈ ಗುಡಿಯನ್ನು ಪ್ರತಿ ಸಂಕ್ರಾಂತಿಯ ಒಂದು ದಿನ ಮಾತ್ರ ತೆರೆಯಲಾಗುವುದು. ಇತರ ದಿನಗಳಲ್ಲಿ ಬರುವ ಭಕ್ತಾದಿಗಳು ದೇವರಿಗೆ ಅರ್ಪಿಸುವ ಹೂ ಇತ್ಯಾದಿ ವಸ್ತುಗಳನ್ನು ಗುಡಿಯ ಹೊಸ್ತಿಲಲ್ಲಿ ಇಡಬಹುದು. ಹೊಸ್ತಿಲಲ್ಲಿ ಇರುವ ಗಂಧಪ್ರಸಾದ ಸ್ವೀಕರಿಸಬಹುದು. ಹೊರಗಡೆ ಇರುವ ದೀಪಕ್ಕೆ ಎಣ್ಣೆ ಹಾಕಿ ಉರಿಸಬಹುದು. ಈ ಬನದಲ್ಲಿ 2009ರಲ್ಲಿ ಶ್ರೀ ಶರ್ಮರು ಆರೂಢ ಪ್ರಶ್ನೆ ಇಟ್ಟ ಕಾಲದಲ್ಲಿ ತಿಳಿಸಿದ ವಿಚಾರಗಳು ಮದುವೆ ಆಗದವರು ಮದುವೆಗಾಗಿ, ಮಕ್ಕಳಾಗದವರು ಮಕ್ಕಳಿಗಾಗಿ ಭಕ್ತಿಯಿಂದ "ಈ ಕ್ಷೇತ್ರದಲ್ಲಿ ಪ್ರಾರ್ಥಿಸಿಕೊಂಡಲ್ಲಿ ಇವರ ಇಚ್ಛೆ ಈಡೇರುವುದು ಮತ್ತು ಚರ್ಮ ರೋಗವುಳ್ಳವರು ಅರ್ಚಕರ ಮೂಲಕ ಬಾವಿಯ ನೀರನ್ನು ಮೈಗೆ ಹಾಕಿಸಿಕೊಂಡು ಪ್ರಾರ್ಥಿಸಿದಲ್ಲಿ ಚರ್ಮರೋಗ ವಾಸಿಯಾಗುವುದು".
ಸ್ಥಳ ನಿಬಂಧನೆ:-ಈ ಕೊಳಕ್ಕೆ ಕೊಳದ ಮನೆ ಕುಟುಂಬದ ಸದಸ್ಯರಲ್ಲದೆ ಬೇರೆ ಯಾರೂ ಇಳಿಯಬಾರದು, ತಾವರೆ ಹೂ ಕೊಯ್ಯಬಾರದು.
ಶ್ರೀ ದೇವಿಯ ಅರ್ಚಕರು
ಕೋಳದ ಮನೆ ಮೂಳೂರು
9964024480
ಪ್ರಖ್ಯಾತ ಜೋತಿಷ್ಯರು
ಪಡುಬಿದ್ರಿ, ಉಡುಪಿ ಜಿಲ್ಲೆ
ಜೋತಿರ್ವಿಜ್ಞಾನಂ
'ಸಮುದ್ಯತ' ಕೊಪ್ಪಲಂಗಡಿ,
ಕಾಪು, ಉಡುಪಿ ಜಿಲ್ಲೆ
9449663356
ಶ್ರೀ ಸದಾಶಿವ ಶೆಟ್ಟಿ, ಇವರು ವಾಣಿಜ್ಯ ತೆರಿಗೆ ಇಲಾಖೆಯ ಸರ್ಕಾರಿ ನೌಕರರಾಗಿದ್ದು ದಿನಾಂಕ 04-10-1976 ರಿಂದ 28-02-2017 ರ ವರೆಗೆ ಸೇವೆ ಸಲ್ಲಿಸಿರುತ್ತಾರೆ.
ಶೆಟ್ಟಿ ಮ್ಯೂಸಿಕ್ (ರಿ) ಕನ್ನರ್ಪಾಡಿ, ಉಡುಪಿ ಇದರ ಸ್ಥಾಪಕ ಮತ್ತು ಗಾಯಕರಾಗಿದ್ದಾರೆ.
2012 ರಿಂದ ಕೋಳದ ಮನೆ ಮೂಳೂರು ಇದರ ಮುಕ್ಕಲಿ ಯಾಗಿದ್ದಾರೆ.
ಮೂಳೂರು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ 2012 ರಿಂದ ಪ್ರಾರಂಬವಾಗಿರುವ ಸಾಂಕೇತಿಕ ಸಿರಿಜಾತ್ರೆಯ ಕುಮಾರಪಾತ್ರಿಯಾಗಿದ್ದಾರೆ ಮತ್ತು ಶ್ರೀ ದೇವಿಯ ಪ್ರತಿಷ್ಟಾಪನಾ ದಿನದಂದು ಪ್ರಶ್ನೆಯಲ್ಲಿ ಶ್ರೀ ದೇವದಾಸ ಶರ್ಮರು ತಿಳಿಸಿದಂತೆ ತಂತ್ರಿ ಗಳು ಪ್ರಾರ್ಥನಾ ಪೊರ್ವಕ ಶ್ರೀ ಸದಾಶಿವ ಶೆಟ್ಟಿಯವರನ್ನು ಶ್ರೀದೇವಿಯ ಅರ್ಚಕರಾಗಿ ನೇಮಿಸಿರುತ್ತಾರೆ.
1990 ರಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ನನ್ನ ಕೊಳದಮನೆ ಕುಟುಂಬದ ದೈವಸ್ಥಾನವನ್ನು ಮತ್ತು 2002 ರಲ್ಲಿ ಕೊಳದಬದಿಯಲ್ಲಿ ಕೊಳದಮನೆ ಕುಟುಂಬದ ಸ್ಥಳದಲ್ಲಿ ಯಾವುದೊ ಕಾಲಗಳಿಂದ ಅಜೀರ್ಣಾವಸ್ಥೆಯಲ್ಲಿದ್ದ ಸಪರಿವಾರ ಶ್ರೀ ನಾಗಬ್ರಹ್ಮಲಿಂಗೇಶ್ವರದೇವಸ್ಥಾನವನ್ನು ಕೊಳದಮನೆ ಕುಟುಂಬದ ಸಂಪೂರ್ಣ ಸಹಕಾರದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ.